ಮಾನವನಲ್ಲಿ ಶ್ವಾಸಕ್ರಿಯೆ (Respiration in Man) :-

ಮಾನವನಲ್ಲಿ ಶ್ವಾಸಕ್ರಿಯೆ (Respiration in Man) :-

ಮಾನವನ ಶ್ವಾಸಕಾಂಗವ್ಯೂಹವು ಮೂಗು, ಗಂಟಲು, ಧ್ವನಿ ಪೆಟ್ಟಿಗೆ, ಶ್ವಾಸನಾಳ, ಬ್ರಾಂಕೈ, ಬ್ರಾಂಕಿಯೋಲ್ ಗಳು ಮತ್ತು ಶ್ವಾಸಕೋಶಗಳನ್ನು ಒಳಗೊಂಡಿರುತ್ತದೆ.

'ಮೂಗು’ ಶ್ವಾಸಕಾಂಗವ್ಯೂಹದ ಮೊದಲನೆಯ ಅಂಗವಾಗಿದೆ. ಇದು ಎರಡು ನಾಸಿಕ ರಂಧ್ರಗಳಿಂದ ವಾತಾವರಣಕ್ಕೆ ತೆರೆದುಕೊಂಡಿವೆ.
ನಾಸಿಕ ರಂಧ್ರಗಳ ಮುಂದಿನ ಭಾಗವೇ ’ನಾಸಿಕ ಕುಹರ’ವಾಗಿದೆ.

ನಾಸಿಕ ಕುಹರದ ಒಳಭಾಗವು ರೋಮಗಳನ್ನು ಹೊಂದಿರುವ ’ಅನುಲೇಪಕ’ ಅಂಗಾಂಶದಿಂದ ಆವರಿಸಲ್ಪಟ್ಟಿದೆ. ಈ ಅಂಗಾಂಶವು ಶ್ಲೇಷವನ್ನು ಸ್ರವಿಸುತ್ತದೆ.

ಇವು ಒಳ ತೆಗೆದುಕೊಂಡ ಗಾಳಿಯಲ್ಲಿರುವ ಧೂಳು, ಪರಾಗರೇಣುಗಳು ಮತ್ತು ಸೂಕ್ಷ್ಮ ವಸ್ತುಗಳನ್ನು ಶೋಧಿಸುತ್ತವೆ
ಗಾಳಿಯನ್ನು ದೇಹದ ಉಷ್ಣಕ್ಕೆ ಅನುಗುಣವಾಗಿ ಬೆಚ್ಚಗೆ ಮಾಡಿ ತೇವಾಂಶದಿಂದ ಕೂಡಿರುವಂತೆ ಮಾಡಿರುತ್ತವೆ.

ಗಾಳಿ ನಂತರ ಗಂಟಲನ್ನು ಪ್ರವೇಶಿಸಿ ಶ್ವಾಸನಾಳದ ಮೊದಲನೆಯ ಭಾಗವಾದ ಧ್ವನಿ ಪೆಟ್ಟಿಗೆಯ ಮೂಲಕ ಶ್ವಾಸನಾಳವನ್ನು ಸೇರುತ್ತದೆ.

ಧ್ವನಿ ಪೆಟ್ಟಿಗೆಯಲ್ಲಿ ಸ್ವರ ತಂತುಗಳಿದ್ದು, ಇವುಗಳ ಕಂಪನಗಳಿಂದ ಶಬ್ದ ಉತ್ಪತ್ತಿಯಾಗುತ್ತವೆ.
ಶ್ವಾಸನಾಳವು ಸ್ನಾಯುವಿನ ಕೊಳವೆಯಾಗಿದೆ.

ಇದರಲ್ಲಿರುವ ’ಸಿ’ ಆಕಾರದ ಮೃದ್ವಸ್ಥಿಕೆಯ ಉಂಗುರಗಳು ಶ್ವಾಸನಾಳ ತೆರೆದಿಡುವಂತೆ ಮಾಡಿ ಕುಗ್ಗದಂತೆ ಮಾಡುತ್ತದೆ. ಇದು ಗಾಳಿಯ ನಿರಂತರ ಚಲನೆಗೆ ಅವಕಾಶ ಮಾಡಿಕೊಡುತ್ತದೆ.

ಶ್ವಾಸನಾಳವು ’ಬ್ರಾಂಕೈ’ಗಳೆಂಬ ಎರಡು ಕವಲುಗಳಾಗಿ ಎಡ ಮತ್ತು ಬಲ ಶ್ವಾಸಕೋಶಗಳನ್ನು ಅನುಕ್ರಮವಾಗಿ ಪ್ರವೇಶಿಸುತ್ತದೆ.

ಬ್ರಾಂಕೈ ಶ್ವಾಸಕೋಶವನ್ನು ಪ್ರವೇಶಿಸಿದ ನಂತರ ಬ್ರಾಂಕಿಯೋಲ್ ಗಳಾಗಿ ಒಡೆದು ಅತ್ಯಂತ ಸೂಕ್ಷ್ಮವಾದ ನಳಿಕೆಗಳು ವಾಯುಕೋಶ (ಆಲ್ವಿಯೋಲೈ)ಗಳೆಂಬ ಚೀಲದಂತಹ ರಚನೆಗಳಲ್ಲಿ ಕೊನೆಗೊಳ್ಲುತ್ತವೆ
ಎರಡು ಶ್ವಾಸಕೋಶಗಳು ಎದೆಯ ಗೂಡಿನಲ್ಲಿವೆ. ದ್ವಿಪದರದ ಪಕ್ಕೆ ಪರೆಯಿಂದ ಪ್ರತಿ ಶ್ವಾಸಕೋಶ ಆವರಿಸಲ್ಪಟ್ಟಿದೆ. ಈ ಪದರಗಳಲ್ಲಿ ದ್ರವವಿದ್ದು ಇದು ಶ್ವಾಸಕೋಶವನ್ನು ತೇವವಾಗಿಟ್ಟಿರುತ್ತದೆ. ಹಾಗೂ ಹೊರಗಿನ ಆಘಾತಗಳಿಂದ ಶ್ವಾಸಕೋಶಗಳನ್ನು ರಕ್ಷಿಸುತ್ತದೆ.

ಶ್ವಾಸಕೋಶಗಳು ಸ್ಪಂಜಿನಂತಹ ಸ್ಥಿತಿಸ್ಥಾಪಕ ಶಕ್ತಿ ಇರುವ ಅಂಗಾಂಶದಿಂದ ಆಗಿವೆ.

ಶ್ವಾಸಕೋಶದಲ್ಲಿ ಬ್ರಾಂಕಿಯೋಲ್ ಗಳು ಅವುಗಳ ಕವಲುಗಳು ಹಾಗೂ ವಾಯುಕೋಶಗಳು ಇರುತ್ತವೆ.

ವಾಯುಕೋಶ ಮತ್ತು ಅದನ್ನು ಆವರಿಸಿರುವ ರಕ್ತ ಲೋಮನಾಳಗಳ ಗೋಡೆಗಳು ಅತಿಸೂಕ್ಷ್ಮವಾಗಿದ್ದು ಅನಿಲಗಳ ವಿನಿಮಯಕ್ಕೆ ಅನುಕೂಲವಾಗಿವೆ.

ಶ್ವಾಸಕ್ರಿಯೆ ನಡೆಯುವ ವಿಧಾನ :-
ಇದು ಎರಡು ಹಂತಗಳನ್ನೊಳಗೊಂಡಿದೆ.
1) ಉಚ್ಛ್ವಾಸ (Inspiration)
2) ನಿಶ್ವಾಸ (Expiration)

ವಾತಾವರಣದ ಗಾಳಿಯನ್ನು ಮೂಗಿನ ಮೂಲಕ ಶ್ವಾಸಕೋಶಗಳಿಗೆ ತೆಗೆದುಕೊಳ್ಳುವುದನ್ನು ’ಉಚ್ಛ್ವಾಸ’ ಎನ್ನುವರು.

ಶ್ವಾಸಕೋಶಗಳಲ್ಲಿರುವ ಗಾಳಿಯನ್ನು ಮೂಗಿನ ಮೂಲಕ ಹೊರ ಹಾಕುವುದನ್ನು ’ನಿಶ್ವಾಸ’ ಎನ್ನುತ್ತಾರೆ.

ಈ ಎರಡು ಕ್ರಿಯೆಗಳು ಒಂದಾದ ನಂತರ ಮತ್ತೊಂದರಂತೆ ಪರ್ಯಾಯವಾಗಿ ಲಯಬದ್ಧವಾಗಿ ನಡೆಯುತ್ತಿರುತ್ತವೆ.

ವಯಸ್ಕರಲ್ಲಿ ಈ ಕ್ರಿಯಗಳ ಪ್ರಮಾಣ ನಿಮಿಷಕ್ಕೆ 18-20 ಇದ್ದರೆ, ಮಕ್ಕಳಲ್ಲಿ ಮತ್ತು ಶಿಶುಗಳಲ್ಲಿ ಅಧಿಕವಾಗಿರುತ್ತದೆ.

Post a Comment

0 Comments