ಮಾನವನ ಮಿದುಳು

ಮಾನವನ ಮಿದುಳು

ಮಿದುಳು ದೇಹದ ಪ್ರಮುಖ ಸಹಭಾಗಿತ್ವ ಮತ್ತು ನಿಯಂತ್ರಣ ಭಾಗ. ಮಾನವನ ಮೆದುಳಿನ ಹೊರ ನೋಟದಲ್ಲಿ ಮೂರು ನಿರ್ದಿಷ್ಟ ಭಾಗಗಳನ್ನು ಕಾಣಬಹುದು. ಅವು

1) ಮುಮ್ಮೆದುಳು

2) ಮಧ್ಯ ಮೆದುಳು

3) ಹಿಮ್ಮೆದುಳು

 ಮಿದುಳಿನ ಹೊರನೋಟದ ಭಾಗಗಳು :-

1) ಮುಮ್ಮೆದುಳು (fore brain) :-

ಮುಮ್ಮೆದುಳು ಮಿದುಳಿನ ಅತಿ ಸಂಕೀರ್ಣ ಭಾಗ. ಇದರಲ್ಲಿ ಮಹಾಮಸ್ತಿಷ್ಕ ಮತ್ತು ಡೈಎನ್‌ಸೆಫೆಲಾನ್ ಎಂಬ ಎರಡು ಪ್ರಮುಖ ಭಾಗಗಳಿವೆ.

a) ಮಹಾಮಸ್ತಿಷ್ಕ (cerebrum) :-

ಮಿದುಳಿನ ಅತ್ಯಂತ ದೊಡ್ಡ ಭಾಗ. ಇದು ಹೆಚ್ಚು ಅಭಿವೃದ್ಧಿ ಹೊಂದಿದೆ.ಮೆದುಳಿನ ಒಟ್ಟು ತೂಕದ ಸುಮಾರು ಶೇ.80 ರಷ್ಟು ತೂಕ, ಇದರದು.ಇದರ ಮೇಲ್ಮೈಯು ವಕ್ರವಾಗಿ ಅನೇಕ ಮಡಿಕೆಗಳಿಂದ ಕೂಡಿದೆ.ಮಹಾಮಸ್ತಿಷ್ಕದಲ್ಲಿ ಎರಡು ಅರ್ಧ ಸಮಗೋಳಗಳಿವೆ - ಅವು ಬಲ ಗೋಳಾರ್ಧ ಮತ್ತು ಎಡ ಗೋಳಾರ್ಧ.ಎರಡು ಗೋಳಾರ್ಧಗಳು ಒಂದು ಎಳೆಯಿಂದ ಬೇರ್ಪಟ್ಟಿದ್ದರೂ, ಒಳಗೆ ಒಂದಕ್ಕೊಂದು "ಕಾರ್ಪಸ್ ಕಲೋಸಮ್" ಎಂಬ ನರಗಳ ಎಳೆಯಿಂದ ಸೇರ್ಪಡೆಯಾಗಿದೆ.ದೇಹದ ಎಡಭಾಗದಿಂದ ಬರುವ ನರಗಳು, ಮಹಾಮಸ್ತಿಷ್ಕದ ಬಲಗೋಳಾರ್ಧಕ್ಕೆ ಸಂಪರ್ಕ ಹೊಂದಿವೆ.ದೇಹದ ಬಲ ಭಾಗದಿಂದ ಬರುವ ನರಗಳು ಕತ್ತಿನ ಭಾಗದಲ್ಲಿ ಅಡ್ಡಹಾಯ್ದು ಮಹಾಮಸ್ತಿಷ್ಕದ ಎಡಗೋಳಾರರ್ಧಕ್ಕೆ ಸಂಪರ್ಕಗೊಂಡಿವೆ.ಮಹಾಮಸ್ತಿಷ್ಕದ ಹೊರಗಿನ ಕಾರ್ಟೆಕ್ಸ್ (ನರಕೋಶಗಳಿಂದ ಕೂಡಿದ ಬೂದು ಬಣ್ಣದ ವಸ್ತುವಿನಿಂದಾಗಿದೆ).ಮಹಾಮಸ್ತಿಷ್ಕದ ಒಳಗಿನ ಮೆಡುಲ್ಲಾ ಭಾಗವು (ಆಕ್ಸಾನ್ ಮತ್ತು ಡೆಂಡ್ರೈಟ್ ಗಳು ಸೇರಿದ ಬಿಳಿಯ ವಸ್ತುವಿನಿಂದಾಗಿದೆ).ಮಾನವನ ಉನ್ನತವಾದ ಬುದ್ದಿವಂತಿಕೆಗೆ, ಹೆಚ್ಚಿನ ಮೇಲ್ಮೈ ವಿಸ್ತೀರ್ಣವನ್ನು ಹೊಂದಿರುವ ಕಾರ್ಟೆಕ್ಸ್ ನ ವಿಸ್ತೃತ ಬೆಳವಣಿಗೆಯೇ ಕಾರಣ.

b) ಡೈಎನ್‌ಸೆಫೆಲಾನ್ :-

ಡೈಎನ್‌ಸೆಫೆಲಾನ್  ಮಹಾಮಸ್ತಿಷ್ಕದಿಂದ ಆವೃತವಾಗಿರುವ ಒಂದು ಚಿಕ್ಕ ಭಾಗ.ಡೈಎನ್‌ಸೆಫೆಲಾನ್ ನಲ್ಲಿ "ಥಲಾಮಸ್ ಮತ್ತು ಹೈಪೋಥಲಾಮಸ್ ಎಂಬ ಎರಡು ಭಾಗಗಳಿವೆ.ಥಲಾಮಸ್ ಜ್ಞಾನೇಂದ್ರಿಯಗಳಿಂದ ಸ್ವೀಕರಿಸಿದ ನರಾವೇಗಗಳನ್ನು ಮಿದುಳಿನ ಕಾರ್ಟೆಕ್ಸ್ ಗೆ ಕಳುಹಿಸುತ್ತದೆ.ಹೈಪೋಥಲಾಮಸ್ ದೇಹದ ಉಷ್ಣತೆ, ದೇಹದ ಸಮತೋಲನ, ಹಸಿವು ಮತ್ತು ನಿದ್ರೆಗಳನ್ನು ನಿಯಂತ್ರಿಸುತ್ತದೆ. ಜೊತೆಗೆ ಸ್ವನಿಯಂತ್ರಕ ನರವ್ಯೂಹ ಮತ್ತು ಪಿಟ್ಯೂಟರಿ ಗ್ರಂಥಿಯನ್ನು ನಿಯಂತ್ರಿಸುತ್ತದೆ.

 

2) ಮಧ್ಯ ಮಿದುಳು (Mid brain) :-

ನರತಂತುಗಳಿಂದ ಕೂಡಿದ ಮಿದುಳಿನ ಒಂದು ಚಿಕ್ಕ ಭಾಗ.ಮಧ್ಯಮಿದುಳು ಮುಮ್ಮೆದಳು ಮತ್ತು ಹಿಮ್ಮೆದುಳಿಗೆ ಸಂಬಂಧ ಕಲ್ಪಿಸುತ್ತದೆ. ಜೊತೆಗೆ ಸಂದೇಶಗಳನ್ನು ಹಿಮ್ಮೆದುಳಿನಿಂದ ಮುಮ್ಮೆದುಳಿಗೆ ಸಾಗಿಸುತ್ತದೆ.ದೃಶ್ಯ ಮತ್ತು ಶ್ರವ್ಯಕ್ಕೆ ಸಂಬಂಧಿಸಿದ ಚೋದನೆಗಳಿಗನುಗುಣವಾಗಿ ತಲೆ ಮತ್ತು ಕತ್ತಿನ ಪರಾವರ್ತಿತ ಚಲನೆಗಳಿಗೆ ಇದು ಕಾರಣ.

 

3) ಹಿಮ್ಮೆದುಳು (Hind brain) :-

ಹಿಮ್ಮೆದುಳಲ್ಲಿ ಅನುಮಸ್ತಿಷ್ಕ, ಪಾನ್ಸ್ ಮತ್ತು ಮೆಡುಲ್ಲಾ ಅಬ್ಲಾಂಗೇಟ್ ಎಂಬ ಮೂರು ಭಾಗಗಳಿವೆ.

 

a) ಅನುಮಸ್ತಿಷ್ಕ (Cerebellum) :-

ಅನುಮಸ್ತಿಷ್ಕ ಮೆದುಳಿನ ಎರಡನೇ ದೊಡ್ಡ ಭಾಗ.ಅನುಮಸ್ತಿಷ್ಕ ಮಹಾಮಸ್ತಿಷ್ಕದ ಕೆಳಗೆ ಮತ್ತು ಹಿಂಭಾಗದಲ್ಲಿದೆ. ಮತ್ತು ದೇಹದ ಸಮತೋಲನವನ್ನು ಕಾಪಾಡುತ್ತದೆ.

 

b) ಪಾನ್ಸ್ (Pons) :-

ಪಾನ್ಸ್ ಅನುಮಸ್ತಿಷ್ಕದ ಮುಂದೆ ಮಧ್ಯಮಿದುಳಿನ ಕೆಳಗೆ ಮತ್ತು ಮೆಡುಲ್ಲಾ ಅಬ್ಲಾಂಗೇಟದ ಮೇಲೆ ಇದೆ.ಪಾನ್ಸ್ ಆಹಾರ ಅಗಿಯುವುದು, ಮುಖದ ಭಾವ ಮತ್ತು ಉಸಿರಾಟದ ಕ್ರಿಯೆಗಳನ್ನು ನಿಯಂತ್ರಿಸುತ್ತದೆ. 

 

c) ಮೆಡುಲ್ಲಾ ಅಬ್ಲಾಂಗೇಟ್ (Medulla oblongata) :-

ಮೆಡುಲ್ಲಾ ಅಬ್ಲಾಂಗೇಟ್  ಮೆದುಳಿನ ಅತಿ ಹಿಂದಿನ ಭಾಗವಾಗಿದ್ದು ,ಮುಂಡದ ಭಾಗದಲ್ಲಿ ಮಿದುಳು ಬಳ್ಳಿಯಾಗಿ ಮುಂದುವರಿಯುತ್ತದೆ.ದೇಹದ ಅನೈಚ್ಛಿಕ ಕ್ರಿಯೆಗಳಾದ ಉಸಿರಾಟ, ಹೃದಯ ಬಡಿತ, ಜೀರ್ಣನಾಳದ ಚಲನೆಗಳನ್ನು ನಿಯಂತ್ರಿಸುತ್ತದೆ ಜೊತೆಗೆ ಸ್ರವಿಕೆ ಮತ್ತು ರಕ್ತದ ಒತ್ತಡದ ನಿಯಂತ್ರಣ ಮುಂತಾದ ಕ್ರಿಯೆಗಳನ್ನು ಸಂಬಂಧಸಿದ ಚಟುವಟಿಕೆಗಳನ್ನು ನಿಯಂತ್ರಿಸುತ್ತದೆ.

 

ನೆನಪಿರಲಿ :-

ವಯಸ್ಕ ಮಾನವನ ಮಿದುಳಿನ ಸರಾಸರಿ ತೂಕ ಸುಮಾರು 1200 ರಿಂದ 1400ಗ್ರಾಂಗಳು.ಮಾನವನ ಮಿದುಳು ಆತನ ದೇಹದ ತೂಕದ ಶೇ.1.9ರಷ್ಟು ಇರುತ್ತದೆ.ದೇಹಕ್ಕೆ ಬೇಕಾದ ಒಟ್ಟು ರಕ್ತದ ಸರಬರಾಜಿನಲ್ಲಿ ಶೇ.20 ರಷ್ಟು ಮಿದುಳಿಗೆ ಬೇಕಾಗುತ್ತದೆ.

Post a Comment

0 Comments